ಮಂಗಳೂರು: ಧರ್ಮಸ್ಥಳದ ಆಪಾದಿತ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದ್ದು, ದೂರುದಾರ ಹಾಗೂ ಮಾಜಿ ನೈರ್ಮಲ್ಯ ಕಾರ್ಮಿಕ ಚಿನ್ನಯ್ಯ ಸಿ.ಎನ್ ಅವರು ಮಾಜಿ ಪೊಲೀಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟಣ್ಣವರ್ ಸೇರಿದಂತೆ ಕೆಲವರ ವಿರುದ್ಧ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಂದೆ ದೂರು ದಾಖಲಿಸಿದ್ದಾರೆ.
ಚಿನ್ನಯ್ಯ ಅವರ ಆರೋಪದ ಪ್ರಕಾರ, ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಬಳಿಕ ತನಿಖೆಯ ದಿಕ್ಕು ಬದಲಿಸುವ ಉದ್ದೇಶದಿಂದ ಕೆಲವರು ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಲು ಹಾಗೂ ಪರೋಕ್ಷ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.
ಜೂನ್ 12ರಂದು ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂಬಂಧಿಸಿದ ವ್ಯಕ್ತಿ ತಮ್ಮ ಸಂಬಂಧಿ ಪುರುಷೋತ್ತಮ್ ಅವರನ್ನು ಸಂಪರ್ಕಿಸಿ, ರಿಟ್ ಅರ್ಜಿ ಸಲ್ಲಿಕೆಯ ಹಿಂದಿರುವವರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಅಲ್ಲದೇ ತಮ್ಮ ಸಂಪರ್ಕ ಸಂಖ್ಯೆಯನ್ನು ಪಡೆಯಲು ಮತ್ತು ಕುಟುಂಬದ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸಿದ್ದರು ಎಂದು ಚಿನ್ನಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅದೇ ದಿನ ರಾತ್ರಿ ಗಿರೀಶ್ ಮಟ್ಟಣ್ಣವರ್ ಅವರು ತಮ್ಮ ಪತ್ನಿಯ ಸಹೋದರಿಯ ಪುತ್ರ ರವಿ ಅವರನ್ನು ಸಂಪರ್ಕಿಸಿ ರಿಟ್ ಅರ್ಜಿಯ ಕುರಿತು ಮಾಹಿತಿ ಪಡೆಯಲು ಪ್ರಯತ್ನಿಸಿದರು. ಈ ಕರೆಗಳ ಮೂಲಕ ಕುಟುಂಬದ ಸದಸ್ಯರಿಗೆ ಪರೋಕ್ಷ ಬೆದರಿಕೆ ಮತ್ತು ಮಾನಸಿಕ ಒತ್ತಡ ಉಂಟುಮಾಡುವ ಪ್ರಯತ್ನ ನಡೆದಿದೆ ಎಂದು ಚಿನ್ನಯ್ಯ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಕುಟುಂಬದ ಸುರಕ್ಷತೆಗೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಚಿನ್ನಯ್ಯ ಎಸ್ಐಟಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಗಿರೀಶ್ ಮಟ್ಟಣ್ಣವರ್, ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಪುರುಷೋತ್ತಮ್ ಮತ್ತು ರವಿ ಅವರೊಂದಿಗೆ ನಡೆದ ದೂರವಾಣಿ ಸಂಭಾಷಣೆಯ ಆಡಿಯೋ ದಾಖಲೆಯನ್ನು ಬಿಡುಗಡೆ ಮಾಡಿರುವ ಅವರು, ಆ ಕರೆಗಳು ಸ್ನೇಹಪರ ಮಾತುಕತೆಯಾಗಿದ್ದು ಯಾವುದೇ ರೀತಿಯ ಬೆದರಿಕೆ ಅಥವಾ ಒತ್ತಡದ ಅಂಶ ಅದರಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಚಿನ್ನಯ್ಯ ಸಲ್ಲಿಸಿರುವ ದೂರು ಸತ್ಯಕ್ಕೆ ದೂರವಾಗಿದ್ದು, ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಬೇರೆ ದಿಕ್ಕಿಗೆ ತಿರುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಟ್ಟಣ್ಣವರ್ ಆರೋಪಿಸಿದ್ದಾರೆ. ಆಡಿಯೋ ಸಂಭಾಷಣೆಯಲ್ಲೇ ಕೆಲವು ಅಂಶಗಳು ತಮ್ಮ ವಾದಕ್ಕೆ ಪೂರಕವಾಗಿವೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಈ ಬೆಳವಣಿಗೆ ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದ್ದು, ಎಸ್ಐಟಿ ದೂರು ಹಾಗೂ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.