ಬೆಂಗಳೂರು: ಪ್ರೇಮ ಸಂಬಂಧದ ವಿಚಾರ ಕುಟುಂಬಕ್ಕೆ ತಿಳಿದು ಮದುವೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ, ಭಗ್ನಪ್ರೇಮಿಯೊಬ್ಬ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ತಿಗಳರಪಾಳ್ಯದ ತುಳಸಿನಗರದಲ್ಲಿ ನಡೆದಿದೆ.
ಮೃತ ಯುವತಿಯನ್ನು ಭವಾನಿ (22) ಎಂದು ಗುರುತಿಸಲಾಗಿದ್ದು, ಪ್ರಕರಣದ ಆರೋಪಿ ಚಂದ್ರಶೇಖರ್ ಎಂದು ತಿಳಿದುಬಂದಿದೆ. ಮೊಬೈಲ್ ಶೋರೂಮ್ನಲ್ಲಿ ಕೆಲಸ ಮಾಡುತ್ತಿದ್ದ ಭವಾನಿಗೆ ಅದೇ ಸ್ಥಳದಲ್ಲಿ ಚಂದ್ರಶೇಖರ್ ಪರಿಚಯವಾಗಿದ್ದು, ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು.
ಆದರೆ, ಯುವತಿಯ ಕುಟುಂಬಸ್ಥರು ಆಕೆಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯಿಸಲು ಮುಂದಾದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಈ ವಿಚಾರದಿಂದ ಆಕ್ರೋಶಗೊಂಡ ಚಂದ್ರಶೇಖರ್, ಭವಾನಿ ವಾಸಿಸುತ್ತಿದ್ದ ಬಾಡಿಗೆ ಕೊಠಡಿಗೆ ತೆರಳಿ ಆಕೆಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕೃತ್ಯ ಎಸಗಿದ ಬಳಿಕ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮತ್ತೊಂದೆಡೆ, ಭವಾನಿಗೆ ಹಲವು ಬಾರಿ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಕೊಠಡಿಯ ಬಳಿ ತೆರಳಿದ ಮನೆ ಮಾಲೀಕರು ಒಳಗಿನಿಂದ ಚಂದ್ರಶೇಖರ್ ನರಳುವ ಶಬ್ದ ಕೇಳಿದ ಬಳಿಕ ಅನುಮಾನಗೊಂಡು ಬಾಗಿಲು ಒಡೆದಿದ್ದಾರೆ. ಆಗ ಭವಾನಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರೋಪಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
#ಬೆಂಗಳೂರು #ತಿಗಳರಪಾಳ್ಯ #ತುಳಸಿನಗರ #ಭವಾನಿ_ಕೊಲೆ_ಪ್ರಕರಣ #ಚಂದ್ರಶೇಖರ್ #ಭಗ್ನಪ್ರೇಮ #ಪ್ರೇಮ_ಪ್ರಕರಣ #ಯುವತಿ_ಕೊಲೆ #ಬ್ಯಾಡರಹಳ್ಳಿ_ಪೊಲೀಸ್ #ಬೆಂಗಳೂರು_ಕ್ರೈಂ #ಕ್ರೈಂ_ನ್ಯೂಸ್ #ಕರ್ನಾಟಕ_ಸುದ್ದಿ #KannadaCrimeNews #BengaluruCrime #BreakingNews