ಕಳೆದ ಹಲವು ತಿಂಗಳುಗಳಿಂದ ಬೆಲೆ ಕುಸಿತದ ಹೊಡೆತಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದ ಕೋಲಾರ ಜಿಲ್ಲೆಯ ಟೊಮ್ಯಾಟೋ ಬೆಳೆಗಾರರಿಗೆ ಈಗ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಮತ್ತೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಕೋಲಾರ ಎಪಿಎಂಸಿ ಆವರಣದಲ್ಲಿ ಇದೀಗ ಟೊಮ್ಯಾಟೋ ವ್ಯಾಪಾರ ಚಟುವಟಿಕೆಗಳು ಜೋರಾಗಿವೆ. ಹೊರ ರಾಜ್ಯಗಳಿಗೆ ಸಾಗಿಸಲು ನೂರಾರು ಲಾರಿಗಳು ಮಾರುಕಟ್ಟೆಯತ್ತ ಆಗಮಿಸುತ್ತಿದ್ದು, ಟೊಮ್ಯಾಟೋ ವಿಂಗಡಣೆ, ಪ್ಯಾಕಿಂಗ್ ಮತ್ತು ಸಾಗಣೆ ಕಾರ್ಯಗಳು ದಿನವಿಡೀ ಚುರುಕುಗೊಂಡಿವೆ.
ಕಳೆದ ಎರಡು ರಿಂದ ಮೂರು ತಿಂಗಳುಗಳ ಕಾಲ ಟೊಮ್ಯಾಟೋ ಬೆಲೆ ಕುಸಿತ ಕಂಡ ಪರಿಣಾಮ ರೈತರು ತೀವ್ರ ಸಂಕಷ್ಟ ಎದುರಿಸಿದ್ದರು. ಉತ್ಪಾದನಾ ವೆಚ್ಚವನ್ನೂ ಮರಳಿ ಪಡೆಯಲು ಸಾಧ್ಯವಾಗದೆ ಹಲವರು ಆತಂಕದಲ್ಲಿದ್ದರು. ಆದರೆ ಸೀಸನ್ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯ ಚಿತ್ರಣ ಸಂಪೂರ್ಣ ಬದಲಾಗಿದೆ.
ಈ ಹಿಂದೆ ಕೆಜಿಗೆ ಕೇವಲ 10 ರಿಂದ 15 ರೂಪಾಯಿ ದರ ಸಿಗುತ್ತಿದ್ದ ಟೊಮ್ಯಾಟೋಗೆ ಈಗ 30 ರಿಂದ 40 ರೂಪಾಯಿವರೆಗೆ ಬೆಲೆ ದೊರೆಯುತ್ತಿದೆ. ಅದೇ ರೀತಿ 15 ಕೆಜಿ ತೂಕದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 150-200 ರೂಪಾಯಿಯಿಂದ ಏಕಾಏಕಿ 500 ರಿಂದ 550 ರೂಪಾಯಿವರೆಗೆ ಏರಿಕೆಯಾಗಿದೆ.
ದೆಹಲಿ, ನಾಸಿಕ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ಹಾಗೂ ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಕೋಲಾರದ ಟೊಮ್ಯಾಟೋಗೆ ಬೇಡಿಕೆ ಹೆಚ್ಚಾಗಿದೆ. ಗುಣಮಟ್ಟ ಮತ್ತು ಹೆಚ್ಚಿನ ಉತ್ಪಾದನೆಯಿಂದ ಕೋಲಾರದ ಟೊಮ್ಯಾಟೋ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ.
ಪ್ರತಿ ವರ್ಷ ಮಳೆಗಾಲದ ಅವಧಿಯಲ್ಲಿ ಹೊರ ರಾಜ್ಯಗಳಲ್ಲಿ ಟೊಮ್ಯಾಟೋ ಉತ್ಪಾದನೆ ಕಡಿಮೆಯಾಗುವ ಹಿನ್ನೆಲೆ ಕೋಲಾರ ಮಾರುಕಟ್ಟೆಯತ್ತ ವ್ಯಾಪಾರಿಗಳ ಗಮನ ಸೆಳೆಯುತ್ತದೆ. ಇದೇ ಕಾರಣದಿಂದ ಜೂನ್ನಿಂದ ಸೆಪ್ಟೆಂಬರ್ವರೆಗೆ ಇಲ್ಲಿ ವ್ಯಾಪಾರ ಹೆಚ್ಚು ಚುರುಕಾಗಿರುತ್ತದೆ.
ಈಗ ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾತ್ರವಲ್ಲದೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳ ರೈತರೂ ತಮ್ಮ ಟೊಮ್ಯಾಟೋ ಬೆಳೆಯನ್ನು ಕೋಲಾರ ಮಾರುಕಟ್ಟೆಗೆ ತರುತ್ತಿದ್ದಾರೆ. ಬೇಡಿಕೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಟೊಮ್ಯಾಟೋ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೆಲ ವ್ಯಾಪಾರಿಗಳ ಅಂದಾಜಿನಂತೆ ಮುಂದಿನ ತಿಂಗಳಲ್ಲಿ 15 ಕೆಜಿ ಬಾಕ್ಸ್ ಟೊಮ್ಯಾಟೋ ಬೆಲೆ ಸಾವಿರ ರೂಪಾಯಿ ಗಡಿ ಮುಟ್ಟುವ ಸಾಧ್ಯತೆಯೂ ಇದೆ.
ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಈಗ ಮಾರುಕಟ್ಟೆಯ ಈ ಏರಿಕೆ ಹೊಸ ಉತ್ಸಾಹ ತುಂಬಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿ ಬೆಳೆಗಾರರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.Tags:#KolarTomato#TomatoPrice#TomatoRateIncrease#KolarAPMC#KolarFarmers#KarnatakaFarmers#TomatoMarket#AgricultureNews#FarmersNews#KarnatakaNews#KolarNews#Chikkaballapur#VegetableMarket#TomatoSeason#KannadaNews#KarunaaduTimes