ಅಪ್ಪನಲ್ಲ ರೀ ಅಸುರ! : "ಊಟ ಸಿಲುಕಿ ಮಗು ಸತ್ತಿದೆ" ಎಂದಿದ್ದ ಪಾಪಿ ತಂದೆಯ ನೀಚತನ!
ಹೊಡೆದು ಕೊಂದ ಸಾಕುತಂದೆ, ಮೂಕಪ್ರೇಕ್ಷಕಳಾದ ತಾಯಿ!
Published Date: 05/06/2026
ಅಪ್ಪನಲ್ಲ ರೀ ಅಸುರ! : "ಊಟ ಸಿಲುಕಿ ಮಗು ಸತ್ತಿದೆ" ಎಂದಿದ್ದ ಪಾಪಿ ತಂದೆಯ ನೀಚತನ ಬಯಲು
ಊಟ ಮಾಡುವ ವೇಳೆ ಗಂಟಲಿನಲ್ಲಿ ಆಹಾರ ಸಿಲುಕಿ ಒಂದೂವರೆ ವರ್ಷದ ಮಗು ಮೃತಪಟ್ಟಿದೆ ಎಂದು ಹೇಳಲಾಗಿದ್ದ ಪ್ರಕರಣವು ಇದೀಗ ಬೆಚ್ಚಿಬೀಳಿಸುವ ತಿರುವು ಪಡೆದುಕೊಂಡಿದೆ. ಕಳೆದ ಮೂರು ತಿಂಗಳಿನಿಂದ ಮಗುವಿನ ಮೇಲೆ ನಿರಂತರವಾಗಿ ನಡೆದಿದ್ದ ಅಮಾನುಷ ಹಿಂಸೆ, ದೈಹಿಕ ದೌರ್ಜನ್ಯ ಹಾಗೂ ಪೂರ್ವನಿಯೋಜಿತ ಕೊಲೆ ಸಂಚಿನ ಕರಾಳ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹೊಡೆದು ಕೊಂದ ಸಾಕುತಂದೆ, ಮೂಕಪ್ರೇಕ್ಷಕಳಾದ ತಾಯಿ!
ಒಂದೂವರೆ ವರ್ಷದ ಆರ್ಶಿದ್ ಎಂಬ ಕಂದಮ್ಮನನ್ನು ಆತನ ಸಾಕುತಂದೆ ಅಶ್ಕರ್ ಕ್ರೂರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಈ ಎಲ್ಲ ದೌರ್ಜನ್ಯಗಳು ನಡೆಯುವಾಗ ಹೆತ್ತ ತಾಯಿ ಅಖಿಲಾ ಮೌನವಾಗಿ ನೋಡುತ್ತ ನಿಂತಿದ್ದಳು ಎನ್ನಲಾಗಿದೆ. ಈ ಹೃದಯವಿದ್ರಾವಕ ಘಟನೆ ಕೇರಳದ ರಾಜಧಾನಿ ತಿರುವನಂತಪುರಂ ಸಮೀಪದ ನೆಡುಮಂಗಾಡ್ ತಾಲೂಕಿನ ಪಾನವೂರಿನಲ್ಲಿ ನಡೆದಿದೆ.
ಅನುಮಾನಕ್ಕೆ ಕಾರಣವಾದ ಸಾವಿನ ಕಥೆ
ಮೇ 29ರ ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಅಶ್ಕರ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಶ್ರೀ ಅವಿಟ್ಟಂ ತಿರುನಾಳ್ (SAT) ಆಸ್ಪತ್ರೆಗೆ ದಾಖಲಿಸಿದ್ದ. ಅಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಈ ವೇಳೆ "ಊಟ ಮಾಡುವಾಗ ಆಹಾರ ಗಂಟಲಿನಲ್ಲಿ ಸಿಲುಕಿದ್ದರಿಂದ ಮಗು ಕುಸಿದು ಬಿದ್ದಿದೆ" ಎಂದು ಅಶ್ಕರ್ ಕಥೆ ಕಟ್ಟಿದ್ದ.
ಆದರೆ ಮಗುವಿನ ಸಾವಿನ ಕುರಿತು ಸಂಬಂಧಿಕರಿಗೆ ಅನುಮಾನ ಮೂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ನಡೆದ ಶವಪರೀಕ್ಷೆಯಲ್ಲಿ ಮಗುವಿನ ದೇಹದೊಳಗಿನ ತೀವ್ರ ರಕ್ತಸ್ರಾವ ಹಾಗೂ ನಿರಂತರ ಹಲ್ಲೆಯೇ ಸಾವಿಗೆ ಕಾರಣ ಎಂಬುದು ಬಹಿರಂಗವಾಯಿತು.
ಮಗುವಿನ ದೇಹದ ಮೇಲೆ 51 ಗಾಯಗಳು!
ಶವಪರೀಕ್ಷೆ ವರದಿ ಕಂಡು ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮಗುವಿನ ದೇಹದ ಮೇಲೆ ಒಟ್ಟು 51 ಗಾಯಗಳ ಗುರುತುಗಳು ಪತ್ತೆಯಾಗಿವೆ. ಜನನಾಂಗದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಕಾಲುಗಳ ಮೇಲೆ ಸಿಗರೇಟ್ನಿಂದ ಸುಟ್ಟ ಗಾಯಗಳ ಗುರುತುಗಳೂ ಕಂಡುಬಂದಿವೆ. ಈ ಹಿನ್ನೆಲೆ ಮೇ 30ರಂದು ಪೊಲೀಸರು ಅಶ್ಕರ್ ಹಾಗೂ ಮಗುವಿನ ತಾಯಿ ಅಖಿಲಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೂರು ತಿಂಗಳ ಹಿಂದೆಯೇ ರೂಪಿಸಿದ್ದ ಕೊಲೆ ಸಂಚು
ವಿಚಾರಣೆ ವೇಳೆ ಅಶ್ಕರ್ ಬೆಚ್ಚಿಬೀಳಿಸುವ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ಅಖಿಲಾ ಜೊತೆಗಿನ ತನ್ನ ಭವಿಷ್ಯದ ಜೀವನಕ್ಕೆ ಮಗು ಅಡ್ಡಿಯಾಗುತ್ತಿದೆ ಎಂದು ಭಾವಿಸಿ ಸುಮಾರು ಮೂರು ತಿಂಗಳ ಹಿಂದೆಯೇ ಮಗುವನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಕಳೆದ ಒಂದು ತಿಂಗಳಿನಿಂದ ಮಗುವಿನ ಮೇಲೆ ನಿರಂತರ ಹಿಂಸೆ ನಡೆಸುತ್ತಿದ್ದುದಾಗಿಯೂ ಹೇಳಿದ್ದಾನೆ.
ಮೇ 29ರಂದು ಮಗು ಜೋರಾಗಿ ಅತ್ತಾಗ ಆತನ ತಲೆಗೆ ಬಲವಾಗಿ ಹೊಡೆದಿದ್ದು, ಬಳಿಕ ಮಗು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಮನೆಯೊಳಗಿನ ಸಾಕ್ಷ್ಯಗಳನ್ನು ನಾಶಪಡಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಮಗುವಿನ ಕಿರುಚಾಟ ಹೊರಗೆ ಕೇಳಿಸದಂತೆ ಬಾಯಿಗೆ ಬಟ್ಟೆ ತುರುಕುತ್ತಿದ್ದ ಹಾಗೂ ಹಲ್ಲೆಗೆ ಬಳಸಿದ ವಸ್ತುಗಳನ್ನು ಕಾಲುವೆಗೆ ಎಸೆದಿದ್ದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಮುರಿದ ಕೈಗಳ ಹಿಂದೆಯೂ ಇತ್ತು ಹಿಂಸೆಯ ಗುರುತು
ಘಟನೆಗೆ ಸುಮಾರು ಒಂದು ತಿಂಗಳ ಮೊದಲು ಮಗುವಿನ ಎರಡೂ ಕೈಗಳು ಮುರಿದಿದ್ದವು. ಈ ಬಗ್ಗೆ ನೆರೆಹೊರೆಯವರು ಪ್ರಶ್ನಿಸಿದಾಗ "ಸೈಕಲ್ನಿಂದ ಬಿದ್ದಿದ್ದಾನೆ" ಎಂದು ಅಶ್ಕರ್ ಸುಳ್ಳು ಹೇಳಿದ್ದ. ತಾಯಿ ಅಖಿಲಾ ಕೂಡ ಮಗುವಿನ ಕೈಗೆ ಪ್ಲಾಸ್ಟರ್ ಹಾಕಿರುವ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಳು.
ಮಗು ಸಾವನ್ನಪ್ಪುವ ಎರಡು ವಾರಗಳ ಮೊದಲು ಬಸ್ ನಿಲ್ದಾಣದಲ್ಲಿ ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಒಬ್ಬರೊಂದಿಗೆ ತೆಗೆಸಿಕೊಂಡಿದ್ದ ಚಿತ್ರದಲ್ಲೂ ಮಗುವಿನ ಎರಡೂ ಕೈಗಳಿಗೆ ಬ್ಯಾಂಡೇಜ್ ಇರುವುದು ಕಂಡುಬಂದಿತ್ತು. ಆಗಲೂ "ಸೈಕಲ್ನಿಂದ ಬಿದ್ದಿದ್ದಾನೆ" ಎಂಬುದೇ ಅವರ ಉತ್ತರವಾಗಿತ್ತು.
ತಾಯಿಯ ಒಪ್ಪಿಗೆ ಬೆಚ್ಚಿಬೀಳಿಸುವಂತದ್ದು
ಪೊಲೀಸರ ವಿಚಾರಣೆ ವೇಳೆ ಅಖಿಲಾ ನೀಡಿರುವ ಹೇಳಿಕೆ ಮತ್ತಷ್ಟು ಆಘಾತ ಮೂಡಿಸಿದೆ. ತನ್ನ ಪ್ರಿಯಕರ ಅಶ್ಕರ್ ಮಗುವಿನ ಮೇಲೆ ಕೋಲಿನಿಂದ ಹಲ್ಲೆ ನಡೆಸುತ್ತಿದ್ದಾಗ ಹಾಗೂ ಅಮಾನುಷವಾಗಿ ಹಿಂಸಿಸುತ್ತಿದ್ದಾಗ ತಾನು ಅಲ್ಲೇ ಇದ್ದೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಆದರೆ ಮಗುವನ್ನು ರಕ್ಷಿಸಲು ಅಥವಾ ಹಲ್ಲೆಯನ್ನು ತಡೆಯಲು ಯಾವುದೇ ಪ್ರಯತ್ನ ಮಾಡಿರಲಿಲ್ಲ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಒಂದೂವರೆ ವರ್ಷದ ಕಂದಮ್ಮ ಅನುಭವಿಸಿದ ನರಕಯಾತನೆ, ಕ್ರೌರ್ಯ ಮತ್ತು ನಿರ್ಲಕ್ಷ್ಯ ಸಮಾಜವನ್ನು ತಲ್ಲಣಗೊಳಿಸಿದ್ದು, ಈ ಪ್ರಕರಣ ಮಾನವೀಯತೆ ಮತ್ತು ತಾಯ್ತನ ಎರಡಕ್ಕೂ ಕಳಂಕ ತರುವಂತಹ ಘಟನೆಯಾಗಿ ಪರಿಣಮಿಸಿದೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.