ಕೃಷ್ಣರಾಜಪೇಟೆ, ಜೂನ್ 5: ಕೃಷ್ಣರಾಜಪೇಟೆ ತಾಲೂಕಿನ ಐತಿಹಾಸಿಕ ಹಾಗೂ ಪುಣ್ಯಕ್ಷೇತ್ರವಾದ ಹೇಮಗಿರಿಯಲ್ಲಿರುವ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗಾಗಿ ವಿಶೇಷ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದೇ ವೇಳೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳ ಪೋಷಕರಿಗೆ ವಿವಿಧ ಬಗೆಯ ಹೂವು ಮತ್ತು ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಬಳ್ಳೇಕೆರೆ ಮಂಜುನಾಥ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಭವಿಷ್ಯದ ನಾಯಕರನ್ನು ರೂಪಿಸುವ ಮಹತ್ತರ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಮೊಬೈಲ್ ಹಾಗೂ ತಂತ್ರಜ್ಞಾನದ ಪ್ರಭಾವಕ್ಕೆ ಒಳಗಾಗುತ್ತಿರುವ ಸಂದರ್ಭದಲ್ಲಿ ಅಕ್ಷರಾಭ್ಯಾಸದಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಹಿರಿಯರ ಬಗ್ಗೆ ಗೌರವದ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.
ಶಿಕ್ಷಣ ಪ್ರೇಮಿ ಹಾಗೂ ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ. ಜೆ.ಎನ್. ರಾಮಕೃಷ್ಣೇಗೌಡ ಅವರು ಪ್ರತಿವರ್ಷ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸನಾತನ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯವನ್ನು ಶ್ರದ್ಧೆಯಿಂದ ನಡೆಸುತ್ತಿದ್ದಾರೆ ಎಂದು ಮಂಜುನಾಥ್ ಶ್ಲಾಘಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಎಂ.ಕೆ. ಹರಿಚರಣತಿಲಕ್ ಮಾತನಾಡಿ, ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ ಎಂದರು. ಮಾನವನ ಅತಿಯಾದ ಹಸ್ತಕ್ಷೇಪ, ನಗರೀಕರಣ ಮತ್ತು ಅರಣ್ಯ ನಾಶದಿಂದ ಪರಿಸರ ಸಮತೋಲನ ಹದಗೆಡುತ್ತಿದ್ದು, ಮಳೆಯ ಕೊರತೆ ಸೇರಿದಂತೆ ಹಲವು ಪ್ರಕೃತಿ ವೈಪರೀತ್ಯಗಳು ಉಂಟಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸುವ ಮೂಲಕ ಪರಿಸರವನ್ನು ಉಳಿಸಬೇಕು ಎಂದು ಕರೆ ನೀಡಿದರು.
ಪುರಸಭೆಯ ಮಾಜಿ ಸದಸ್ಯ ಕೆ.ಆರ್. ನೀಲಕಂಠ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಭಾರತದ ಸತ್ಪ್ರಜೆಗಳು. ಮಕ್ಕಳಿಗೆ ಆಸ್ತಿ ಸಂಪಾದಿಸಿ ನೀಡುವುದಕ್ಕಿಂತ ಉತ್ತಮ ಶಿಕ್ಷಣ, ಸಂಸ್ಕಾರ ಮತ್ತು ಮೌಲ್ಯಗಳನ್ನು ನೀಡುವುದು ಅತ್ಯಂತ ಮುಖ್ಯವಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಸಾಧನೆ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಅಗ್ರಹಾರ ಬಾಚಹಳ್ಳಿ ಶ್ರೀನಿವಾಸ್, ಹೊನ್ನೇನಹಳ್ಳಿ ರವಿ, ಕಾಮನಹಳ್ಳಿ ಮಂಜುನಾಥ್, ಗಂಜಿಗೆರೆ ಮಹೇಶ್, ಮಾಕವಳ್ಳಿ ಮನು, ಸಾಯಿಕುಮಾರ್, ಸೈಯದ್ ಖಲೀ. ಲ್, ಬಿಜಿಎಸ್ ಶಾಲೆಯ ಮುಖ್ಯಸ್ಥ ಪುನೀತ್ ಕುಮಾರ್, ಜಯಶೀಲ, ಸುರೇಶ್ ಸೇರಿದಂತೆ ಶಾಲಾ ಮಕ್ಕಳ ನೂರಾರು ಪೋಷಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಅಕ್ಷರಾಭ್ಯಾಸ, ಸಂಸ್ಕಾರ ಶಿಕ್ಷಣ ಹಾಗೂ ಪರಿಸರ ಜಾಗೃತಿಯನ್ನು ಒಟ್ಟುಗೂಡಿಸಿದ ಈ ಕಾರ್ಯಕ್ರಮವು ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಮೆಚ್ಚುಗೆಗೆ
ಪಾತ್ರವಾಯಿತು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.